ಅನಾರ್ಜಿತ ವರಮಾನ

	ಯಾವ ರೀತಿ ಮಾನಸಿಕ ಅಥವಾ ಕಾಯಕವಾದ ಪ್ರಯತ್ನವಿಲ್ಲದೆ ಆತಂಕ ಆಯಾಸಗಳಿಲ್ಲದೆ ಅಕಸ್ಮಾತ್ತಾಗಿ ಒದಗುವ ವರಮಾನವನ್ನು ಅನಾರ್ಜಿತ ವರಮಾನವೆಂದು (ಅನ್ ಅನ್ರ್ಡ್ ಇನ್‍ಕಮ್) ಹೇಳಬಹುದು. ಈ ತೆರನಾದ ವರಮಾನ ಬರುವುದು ಮಾನವಜೀವನದಲ್ಲಿ ಅತಿ ವಿರಳವೆಂದೇ ಹೇಳಬೇಕು. ಸಾಧಾರಣವಾಗಿ ಶ್ರಮಪಡದೆ, ದೈಹಿಕ ಅಥವಾ ಮಾನಸಿಕ ಆಯಾಸವಿಲ್ಲದೆ ವರಮಾನ ಬರಬೇಕೆಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ಕೈ ಕೆಸರಾದರೆ ಬಾಯಿ ಮೊಸರೆನ್ನುವುದು ಎಲ್ಲರಿಗೂ ತಿಳಿದ ವಿಷಯ.

	ಆದರೆ ಹಲವು ಅಪರೂಪ ಸಂದರ್ಭಗಳಲ್ಲಿ ಪೂರ್ವಾರ್ಜಿತ ಪುಣ್ಯ ಫಲವೆಂಬಂತೆ, ವರಮಾನ ಅಥವಾ ಸಂಪತ್ತು ವಿಪುಲವಾಗಿ ಕೆಲವರಿಗೆ ದೊರೆಯಬಹುದು. ಬೆಂಗಳೂರಿನಂಥ ನಗರದಲ್ಲಿ ಸುಮಾರು 50 ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ಹಲವು ಎಕರೆ ಜಮೀನನ್ನು ಅತಿ ಸ್ವಲ್ಪ ಬೆಲೆಗೊ ಅಥವಾ ದಾನವಾಗಿಯೊ ಪಡೆದಿದ್ದು, ನಗರ ವಿಶೇಷವಾಗಿ ಬೆಳೆದು ಅನೇಕ ಉಪನಗರ ಅಥವಾ ಬಡಾವಣೆಗಳು ಬೆಳೆಯುತ್ತಿರುವುದರಿಂದ ಆ ವ್ಯಕ್ತಿಯ ಮಗನೊ ಅಥವಾ ಮೊಮ್ಮಗನೊ ಆ ಜಮೀನನ್ನು ಸೈಟುಗಳಾಗಿ ಮಾಡಿ ಮಾರುವುದರಿಂದ ಆಯಾಸವಿಲ್ಲದೆ ಲಕ್ಷಾಂತರ ರೂಪಾಯಿಗಳನ್ನು ಪಡೆಯುತ್ತಿರುವ ನಿದರ್ಶನಗಳು ಹಲವಾರಿವೆ. ಹಾಗೆಯೆ ಹಳೆಯ ನಗರಪ್ರದೇಶಗಳಲ್ಲಿ ಒಬ್ಬಾತ ಹಳೆಯ ಮನೆಯನ್ನು ಕೊಂಡು ಅದನ್ನು ಕೆಡವಿಸಿ ಹೊಸದಾಗಿ ಭವ್ಯವಾದ ಮಂದಿರವನ್ನು ಕಟ್ಟಿಸುವ ಪ್ರಯತ್ನದಲ್ಲಿ ತಳಪಾಯಕ್ಕಾಗಿ ಅಗೆತ ಮಾಡುತ್ತಿರುವಾಗ ನಾಲ್ಕು ಮಡಕೆಗಳ ತುಂಬ ಚಿನ್ನದ ನಾರಸಿಂಹವರಹಗಳು ಸಿಕ್ಕಿದರೆ ಆತ ಇದ್ದಕ್ಕಿದ್ದ ಹಾಗೆ ಶ್ರೀಮಂತನಾದನೆಂದು ಸೋಜಿಗಪಟ್ಟು ಆತನನ್ನು ಜನ ಲಕ್ಷ್ಮೀಪುತ್ರನೆಂದು ಕರೆಯುವುದು ಸಹಜ. ಇದರಂತೆ ಡರ್ಬಿಸ್ವೀಪ್ ಮುಂತಾದ ಲಾಟರಿ, ಕುದುರೆಜೂಜು, ಸಟ್ಟಾ ವ್ಯಾಪಾರ, ಷೇರು ಮತ್ತು ಸ್ಟಾಕುಗಳ ವ್ಯವಹಾರ ಬೋನಸ್ ಷೇರುಗಳು- ಮುಂತಾದವುಗಳಿಂದ ಅದೃಷ್ಟಶಾಲಿಗಳಾದ ಕೆಲವರು ಊಹಿಸಲಾರದಷ್ಟು ವಿಫುಲವಾಗಿ ಹಣಗಳಿಸಿ ಶ್ರೀಮಂತರಾಗಬಹುದು. ಅನೇಕ ಶ್ರೀಮಂತ ಕುಟುಂಬಗಳು ತಾವು ಹೇರಳವಾಗಿ ಸಂಪಾದಿಸಿರುವ ಹಣ, ಚಿನ್ನ, ಆಸ್ತಿಪಾಸ್ತಿಗಳನ್ನು ವಾರಸುದಾರರಿಲ್ಲದೆ ಬಿಟ್ಟುಹೋದಾಗ ಆ ಕುಟುಂಬದ ದೂರದ ಸಂಬಂಧಿಗಳಿಗೆ ಆ ಸಂಪತ್ತು ಅನಾಯಾಸವಾಗಿ ಸೇರಬಹುದು. ಹಾಗೆಯೇ ಸಂತಾನವಿಲ್ಲದ ಮೃತರ ಉಯಿಲಿನಂತೆ ಆಸ್ತಿಪಾಸ್ತಿಗಳು ರಕ್ತ ಸಂಬಂಧವೂ ಇಲ್ಲದ ಇತರರಿಗೆ ಸೇರಬಹುದು. ದೈಹಿಕ ಅಥವಾ ಮಾನಸಿಕಶ್ರಮದಿಂದ ದುಡಿದು ಸಂಪಾದಿಸುವ ವರಮಾನಕ್ಕೂ ಆಸ್ತಿರೂಪದಲ್ಲಿರುವ ಕಟ್ಟಡ ಜಮೀನುಗಳಿಂದ ಬಾಡಿಗೆ ರೂಪದಲ್ಲಿ ಬರುವ ವರಮಾನಕ್ಕೂ ವ್ಯತ್ಯಾಸವಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಮೊದಲನೆಯದು ಆರ್ಜಿತವರಮಾನ. ಎರಡನೆಯದು ಅನಾರ್ಜಿತವರಮಾನ.

	ಸ್ವಲ್ಪವೂ ಕಷ್ಟಪಡದೆ ಅನಾರ್ಜಿತವಾಗಿ ಬಂದ ಸಂಪತ್ತು ಬಹುಕಾಲ ನಿಲ್ಲುವುದಿಲ್ಲವೆಂಬ ನಂಬಿಕೆ ನಮ್ಮ ಜನರಲ್ಲಿ ರೂಢಿಮೂಲವಾಗಿದೆ. ಈ ಅನಾರ್ಜಿತ ಸಂಪತ್ತು ವ್ಯಕ್ತಿಗೆ ಸೇರಿದ್ದಾದರೂ ಸಮತಾವಾದಿಗಳ ಅಭಿಪ್ರಾಯದಂತೆ ಕಷ್ಟಪಡದೆ ಅನಾಯಾಸವಾಗಿ ವ್ಯಕ್ತಿಗೆ ದೊರೆತ ವರಮಾನ ಮತ್ತು ಆಸ್ತಿಪಾಸ್ತಿಗಳಲ್ಲಿನ ಹೆಚ್ಚಿನ ಭಾಗ ಸಮಾಜಕ್ಕೆ ಅಥವಾ ಸರ್ಕಾರಕ್ಕೆ ಸೇರಬೇಕು. ಈ ತತ್ತ್ವವನ್ನು ಒಪ್ಪಬಹುದಾದರೂ ವ್ಯಕ್ತಿಗಳ ಆಸ್ತಿಪಾಸ್ತಿ ವರಮಾನಗಳನ್ನು ರಕ್ಷಿಸುವ ಭಾರವನ್ನು ಹೊತ್ತಿರುವ ಸರ್ಕಾರ, ವ್ಯಕ್ತಿಗಳ ಹಕ್ಕುಬಾಧ್ಯತೆಗಳನ್ನು ಮನ್ನಣೆ ಮಾಡಲೇಬೇಕು. ಸಮಾಜದ ಬೆಳೆವಣಿಗೆಯಿಂದ ಅನಾಯಾಸವಾಗಿ ವ್ಯಕ್ತಿಗಳಿಗೆ ದೊರೆಯುವ ಅನಾರ್ಜಿತ ವರಮಾನದಲ್ಲಿ ಸಮಾಜಕ್ಕೆ ಹಕ್ಕಿರುತ್ತದೆ ಎಂಬುದನ್ನು ನಾವು ಒಪ್ಪಲೇಬೇಕಾಗುತ್ತದೆ. ಇದರಿಂದ ಈ ತೆರನಾದ ವರಮಾನ ಸುಗಮವಾಗಿ ಬರುವಂತೆ ದೇಶದಲ್ಲಿ ಶಾಂತಿಪಾಲನೆ ಮಾಡುತ್ತಿರುವ ಸರ್ಕಾರ ಹಲವಾರು ತೆರಿಗೆಗಳ ರೂಪದಲ್ಲಿ ತನ್ನ ಭಾಗವನ್ನು ಪಡೆಯುತ್ತದೆ. ಮೃತರ ಆಸ್ತಿಪಾಸ್ತಿತೆರಿಗೆ, ಜೂಜು, ಸಟ್ಟಾ ವ್ಯಾಪಾರದ ತೆರಿಗೆ, ಅಧಿಕ ಲಾಭದ ತೆರಿಗೆ, ಸೂಪರ್ ಟ್ಯಾಕ್ಸ್, ಸಂಪತ್ತಿನ ತೆರಿಗೆ, ದಾನ ತೆರಿಗೆ, ಖರ್ಚಿನ ತೆರಿಗೆ, ನಗರ ಪ್ರದೇಶಗಳ ಖಾಲಿ ನಿವೇಶನಗಳ ತೆರಿಗೆ- ಮುಂತಾದವುಗಳನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಆಸ್ತಿ ಪಡೆಯುವ ವ್ಯಕ್ತಿಗೂ ಮೃತರಿಗೂ ಸಂಬಂಧ ದೂರವಾದಷ್ಟು ತೆರಿಗೆ ದರ ಹೆಚ್ಚಬೇಕೆಂಬ ತತ್ತ್ವಕ್ಕೆ ಮನ್ನಣೆ ದೊರೆತಿದೆ. ಈ ಹಲವು ತೆರಿಗೆಗಳನ್ನು ಸಂದರ್ಭೋಚಿತವಾಗಿ ಹೆಚ್ಚುಕಡಿಮೆ ಮಾಡುವ ಪರಮಾಧಿಕಾರ ಸರಕಾರಕ್ಕಿದೆ. ವ್ಯಕ್ತಿಯ ವರಮಾನವೇ ಆಗಲಿ ಆಸ್ತಿಪಾಸ್ತಿಯೇ ಆಗಲೀ ಅನಿರೀಕ್ಷಿತವಾದಂತೆಯೂ ಅನಾರ್ಜಿತವಾದಂತೆಯೂ ಆತನ ಕರಧಾರಣಶಕ್ತಿ ಹೆಚ್ಚುವುದು ನ್ಯಾಯಸಮ್ಮತವಾಗಿದೆ ಎಂದು ಭಾವಿಸಬಹುದು. ಹೆಚ್ಚು ತೆರಿಗೆ ತೆತ್ತರೂ ಆ ವ್ಯಕ್ತಿಗೆ ಯಾವ ತೊಂದರೆಯೂ ಇಲ್ಲದೆ ಸಾಮಾಜಿಕವಾಗಿ ಸಂಪತ್ತಿನ ಉತ್ಪಾದನೆ, ಅನುಭೋಗ ಮತ್ತು ವಿನಿಯೋಗಗಳಲ್ಲಿ ಏರುಪೇರುಗಳಾಗದೆ, ರಾಷ್ಟ್ರದಲ್ಲಿರಬಹುದಾದ ಬಡವ ಬಲ್ಲಿದರ ಅಂತರವನ್ನು ಕಡಿಮೆಮಾಡಿ ಸಮತಾವಾದ ಸಮಾಜವನ್ನು ಸ್ಥಾಪಿಸುವ ಸುಖೀರಾಜ್ಯದ ಧ್ಯೇಯಸಾಧನೆಗೆ ಅನಾರ್ಜಿತ ವರಮಾನದ ಮತ್ತು ಆಸ್ತಿಪಾಸ್ತಿಯ ತೆರಿಗೆಗಳು ಸಾಧಕವಾಗುವುದೆಂದು ಒಪ್ಪಬಹುದು.

(ಬಿ.ಆರ್.ಎಸ್.)
ಪರಿಷ್ಕರಣೆ : 
ಜಿ ಎಸ್ ಶ್ರೀನಾಥ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ